Research

Please refer to Articles section of Yakshamitra website for general articles. The research articles will be available here as we make progress.

1. Yakshagana Shruti and Harmony

2. Yakshagana Bells and Their Physics

3. Audio Technology for Yakshagana

4. The Chande Drum and Its Tonal Characteristics.

  • Understanding the secret of Chande strokes

An Extensive Index of Many Yakshagana Books (Click to Download)

(Courtesy Shri M Prabhakar Joshy)

A list of Book by Yakshagana Kendra - Udupi (Click for PDF)

Please contact: Yakshagana Kendra to purchase above books: Phone: 91-820-2521159(O) 91-820-2575789(R) Email: mgmcollegeudupi@dataone.in

(Courtesy Dr Krishna Bhat, Director Yakshagana Kendra Udupi)

Books on Yakshagana - Some Yakshamitra Collections

ಹಿಮ್ಮೇಳ - ಯಕ್ಷಗಾನ ಬಯಲಾಟದ ಆಮೂಲಾಗ್ರ ಅಧ್ಯಯನ

ಆಟ, ದಶಾವತಾರ, ಬಯಲಾಟ ಎಂದೇ ನೂರಾರು ವರ್ಷಗಳಿಂದ ಪ್ರಸಿದ್ಧವಾಗಿದ್ದ ಕನ್ನಡದ ಕಲೆಯ ಇತ್ತೀಚಿನ ಹೆಸರೇ ಯಕ್ಷಗಾನ. ಜಾನಪದ ಕಲೆ ಎಂದು ಯಾವುದೇ ಪ್ರೊತ್ಸಾಹವಿಲ್ಲದೇ ತಿರಸ್ಕಾರಕ್ಕೆ ಒಳಗಾದ ಬಯಲಾಟದ ಅನೇಕ ವಿಧಗಳಲ್ಲಿ ಇದೂ ಒಂದು. ದೊಡ್ಡಾಟ, ಘಟ್ಟದಕೋರೆ, ಶ್ರೀ ಕೃಷ್ಣ ಪಾರಿಜಾತ ಹೀಗೆ ಅನೇಕ ರಂಗ ಕಲೆಗಳು ಮೂಲೆ ಗುಂಪಾಗಿ ನಶಿಸಿ ಹೋಗಿವೆ ಹೋಗುತ್ತಿವೆ. ಯಕ್ಷಗಾನವೆಂದು ಕರಾವಳಿ ಮತ್ತು ಮಲೆನಾಡಿನ ಬಡಗು ಮತ್ತು ತೆಂಕು ಶೈಲಿಯ ಆಟ ಇತ್ತೀಚೆಗೆ ಪ್ರಸಿದ್ಧಿಗೆ ಬಂದರೂ ಸಿನೆಮಾ, ಸುಗಮ ಸಂಗೀತ, ಟಿವಿ ಮತ್ತು ಶಾಸ್ತ್ರೀಯ ಎನಿಸಿಕೊಂಡ ಕಲೆಗಳ ಹಾವಳಿಗೆ ಸಿಕ್ಕು ಸಂಪೋರ್ಣ ವಿಕಾರಗೊಂಡು ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತ ತಲುಪಿದೆ. ಯಾವುದು ಯಕ್ಷಗಾನ ಯಾವುದು ಅಲ್ಲ ಎಂದು ದಿಟ್ಟವಾಗಿ ಪರಿಷ್ಕರಿಸಿ, ಯಕ್ಷಗಾನದ ಹಿಂದಿರುವ ತತ್ವಗಳು ಏನು, ಅದರ ರೂಪುರೇಷೆ ಯಾವುದು, ತಾಳ ರಾಗ ಕುಣಿತಗಳ ಹಿಂದಿರುವ ಚಾಲಕ ವ್ಯಾಕರಣ ಯಾವುದು ಎಂಬಿತ್ಯಾದಿ ಸಂಶೋಧನೆ ಮಾಡಿ ದಾಖಲಿಸುವ ಪ್ರಯತ್ನ ಸಂಪೂರ್ಣವಾಗಿ ಆಗಿರಲಿಲ್ಲ. ಅದಕ್ಕೆ ಪರಿಹಾರ ಸದೃಶವಾಗಿ ಡಾ ರಾಘವ ನಂಬಿಯಾರರ ಕೃತಿ 'ಹಿಮ್ಮೇಳ' ಈಗ ಪ್ರಕಟವಾಗಿದೆ.

ಯಕ್ಷಗಾನದ ಮೂಲ ಏನು ಎನ್ನುವುದರಿಂದ ಪ್ರಾರಂಭವಾಗುವ ಈ ಪುಸ್ತಕ, ಲಯ ಪ್ರಧಾನವಾದ ಯಕ್ಷಗಾನ ಕಲೆಯ ತಾಳಗಳ ರೂಪವನ್ನು ಶಾಸ್ತ್ರೀಯವಾಗಿ ನಿರೂಪಿಸುವ ಕೆಲಸ ಮಾಡುತ್ತದೆ. ಕರ್ನಾಟಕ ಸಂಗೀತಕ್ಕೆ ಹೋಲಿಸಿ, ತಾಳಗಳು, ಹಾಡುಗಳ ಸೊಲ್ಲಿಗೆ ಹೇಗೆ ಆಪ್ಯಾಯವಾಗಿ ಅಂಟಿಕೊಳ್ಳುತ್ತವೆ ಎಂದು ವಿವರಿಸುತ್ತದೆ. ಇಲ್ಲಿ ಎದ್ದು ಕಾಣುವ ಅಂಶ ಎಂದರೆ, ಯಕ್ಷಗಾನದಲ್ಲಿ ಕರ್ನಾಟಕ ಸಂಗೀತದ ತಾಳಗಳ ಮೂಲ ಸ್ವರೂಪ ಇನ್ನೂ ಜೀವಂತವಾಗಿದೆ ಎಂದು ನಂಬಿಯಾರರು ಸಿದ್ಧಮಾಡಿ ತೋರಿಸುವುದು. ಅಲ್ಲದೇ ತಾಳಗಳ ಹತ್ತು ಲಕ್ಷಣಗಳನ್ನು ಯಕ್ಷಗಾನದ ತಾಳಗಳಲ್ಲಿ ಹೇಗೆ ಕಾಣಬಹುದು ಎಂಬ ಅವರ ವಿವರಣೆ ಬಹಳ ಸ್ವಾರಸ್ಯಕರವಾಗಿ ಮೂಡಿಬಂದಿದೆ. ಇದರಲ್ಲಿ ಸಂಗೀತಕ್ಕೆ ಈ ಪುಸ್ತಕ ಕೊಡುವ ಒಂದು ಅಮೂಲ್ಯ ಕೊಡುಗೆ ಎಂದರೆ, ತಾಳಗಳ ಅಕ್ಷರ, ವಿಭಜನೆ ಮತ್ತು ಗತಿ ಎಲ್ಲಾವೂ ಒಂದೇ ಆಗಿದ್ದರೂ ಅಕ್ಷರದ ಕಾಲದ ಬದಲಾವಣೆ ಒಂದರಿಂದಲೇ ತಾಳ ಬದಲಾಗಬಹುದು ಎನ್ನುವ ಸಂಶೋಧನೆ.

ಯಕ್ಷಗಾನದ ಉಪಕರಣಗಳಾದ ಎರಡೂ ತಿಟ್ಟಿನ, ಕಂಚಿನ ತಾಳ, ಚಂಡೆ, ಮದ್ದಲೆ ಇತ್ಯಾದಿಗಳ ರಚನೆ, ಬಾರಿಸುವ ರೀತಿ ಮತ್ತು ಅವುಗಳ ಹಿಂದಿರುವ ತತ್ವ ಇವೆಲ್ಲವನ್ನೂ ಸಾದರಪಡಿಸಿ ಅವುಗಳನ್ನೂ ಸಂಪೂರ್ಣವಾಗಿ ರಚಿಸುವ ವಿವರನ್ನೂ ಈ ಪುಸ್ತಕದಲ್ಲಿ ನೀಡಿದ್ದಾರೆ ನಂಬಿಯಾರರು. ಯಕ್ಷಗಾನದ ಗುಟ್ಟು ಇರುವುದು ಮಟ್ಟುಗಳಲ್ಲಿ ಎಂದು ಬಲ್ಲವರು ಹೇಳಿದ್ದು! ಮಟ್ಟುಗಳೆಂದರೆ ವಿವಿಧ ಅಳತೆಯ ಛಂದೋಲಯಗಳಿಂದ ಉಂಟಾಗುವ ಹಾಡಿನ ಧಾಟಿ. ಒಂದೇ ರಾಗಗಳಲ್ಲಿ ಬರುವ ಬೇರೆ ಬೇರೆ ಮಟ್ಟುಗಳು ತಾಳಗಳಿಗೆ ಹೇಗೆ ಹೊಂದುತ್ತವೆ ಎಂದು ಕೋಷ್ಟಕಗಳ ಮೂಲಕ ತೋರಿಸುವ ಹೊಸ ಆವಿಷ್ಕಾರ ಇಲ್ಲಿ ಕಾಣಸಿಗುತ್ತದೆ. ಹೀಗೆ ಸುಮಾರು ೪೦ ವರ್ಷಕ್ಕೂ ಹೆಚ್ಚಿನ ಸಂಶೋಧನೆಯನ್ನು ಈ ಪುಸ್ತಕದಲ್ಲಿ ಹುದುಗಿಸಿಟ್ಟು ಯಕ್ಷಗಾನದ ರೂಪುರೇಷೆ ಮೂಲಧರ್ಮ ಅಜರಾಮರವಾಗಿ ಉಳಿಯುವಂತೆ ಮಾಡಿರುವುದು ರಾಘವ ನಂಬಿಯಾರರ ಹಿಮ್ಮೇಳ ಪುಸ್ತಕದ ಸಾಧನೆ.

ಎಲ್ಲಾ ಕಲೆಗಳಂತೆ ಯಕ್ಷಗಾನವೂ ಒಂದು ಮಾಧ್ಯಮ. ಬದಲಾವಣೆ ಒಳ್ಳೆಯದು, ಆದರೆ ಆ ಬದಲಾವಣೆಗಳು ಈ ಮಾಧ್ಯಮವನ್ನು ಬಲಪಡಿಸುವಂತಾಗಬೇಕೇ ಹೊರತು ಹಾಳುಮಾಡಿದಂತಾಗಬಾರದು. ಬುದ್ಧಿಪೂರ್ವಕವಾಗಿ, ಯಕ್ಷಗಾನದ ಮೂಲ ಚೌಕಟ್ಟಿನ ಅರಿವು ಮತ್ತು ಶ್ರೇಷ್ಟ ಕಲಾವಿದರ ಅನುಭವಗಳ ಸಂಮಿಶ್ರಣದಿಂದ ಬದಲಾವನಣೆ ಅಭಿವೃದ್ಧಿ ಬರಬೇಕು ಎನ್ನುವ ಕಳಕಳಿ ಈ ಪುಸ್ತಕದುದ್ದಕ್ಕೂ ಕಾಣಸಿಗುತ್ತದೆ. ನಮ್ಮ ಕನ್ನಡದ ಕಲೆಯಗಳ ಬಗ್ಗೆ ಒಲುಮೆ ಇದ್ದವರೆಲ್ಲರೂ ಓದಲೇ ಬೇಕಾದ ಗ್ರಂಥ - ಹಿಮ್ಮೇಳ.

ವೀ ಸೂ: ಈ ಗ್ರಂಥದ ಪುನರ್ಮುದ್ರಣಕ್ಕಾಗಿ ಪ್ರಯತ್ನ ನೆಡೆದಿದೆ. ತಾವೆಲ್ಲರೂ ಸಹಕರಿಸಬೇಕಾಗಿ ವಿನಂತಿ. ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ತಾಣವನ್ನು ಭೇಟಿಮಾಡಿ:

http://www.shruti.hejje.com/pledge

ಚಿತ್ರಗಳ ಮೂಲಕ ಸಮಕಾಲೀನ ಯಕ್ಷಗಾನ

ಶ್ರೀ ಮನೋಹರ್ ಕುಂದರ್ ಅವರ ಸಂಪಾದಕತ್ವದಲ್ಲಿ ಅವರೇ ಹೊರತಂದಿರುವ "ಚಿತ್ರಗಳ ಮೂಲಕ ಸಮಕಾಲೀನ ಯಕ್ಷಗಾನ" ಒಂದು ಸಂಗ್ರಹಯೋಗ್ಯ ಪುಸ್ತಕ. ಕಳೆದ ಹಲವು ದಶಕಗಳಲ್ಲಿ ಯಕ್ಷಗಾನ ವೇಷಗಳು ತೆಂಕು ಹಾಗು ಬಡಗಿನಲ್ಲಿ ಯಾವ ಯಾವ ರೂಪಂತರಗಳನ್ನು ಹೊಂದಿವೆ ಎಂಬುದನ್ನು ನೂರಾರು ಅಪರೂಪದ ಛಾಯಾಚಿತ್ರಗಳ ಮೂಲಕ ತೋರಿಸುವ ಪ್ರಯತ್ನವನ್ನು ಈ ಪುಸ್ತಕದಲ್ಲಿ ಮಾಡಲಾಗಿದೆ. ಯಕ್ಷಗಾನ ವೇಷಗಳಲ್ಲಿ ಯಾವುದು ಸಾಂಪ್ರದಾಯಿಕ ಯಾವುದು ಆಧುನಿಕ ಎಂಬುದನ್ನು ಅರಿಯಲು ಪ್ರತಿಯೊಬ್ಬ ಯಕ್ಷಗಾನ ಅಭಿಮಾನಿಯ ಮತ್ತು ಕಲಾವಿದನ ಬಳಿಯಲ್ಲಿ ಇರಬೇಕಾದ ಪುಸ್ತಕ ಇದು. ಸಾಂಪ್ರದಾಯಿಕ ವೇಷಗಳ ಪುನಾರಚನೆಗೆ (ಉದಾಹರಣೆಗೆ ಯಕ್ಷಗಾನದಲ್ಲಿ ಈಗ ಕಣ್ಮರೆಯಾಗಿರುವ ಬಡಗಿನ ಹನುಮಂತ) ಸಹ ಅನುಕೂಳವಗಬಹುದಾದ ಪುಸ್ತಕ ಇದು.ಈ ಪುಸ್ತಕಕ್ಕೆ ಸಂಶೋಧಕ ಶ್ರೀ ರಾಘವ ನಂಬಿಯಾರ್ ಬರೆದ ಮುನ್ನುಡಿ ಮತ್ತು ಮನೋಹರ್ ಅವರ ಅರಿಕೆ ಸಹ ಬಹಳ ವಿವರವಾಗಿದ್ದು ಆಸಕ್ತರಿಗೆ ಯಕ್ಷಗಾನ ವೇಷಗಳು ಬೆಳೆದು ಬಂದು ರೂಪಾಂತರಗೊಂಡ ಬಗೆಯನ್ನು ವಿವರಿಸುತ್ತವೆ. ವೇಷಗಳು ಹೇಗಿರಬೇಕು ಎಂದು ತೋರಿಸುವುದರ ಜೊತೆಗೆ ಹೇಗಿರಬಾರದು ಎಂದು ತೋರಿಸುವ ಅನೇಕ ಚಿತ್ರಗಳನ್ನು ಸಹ ಈ ಪುಸ್ತಕ ಒಳಗೊಂಡಿದೆ.

ಶೇಣಿಭಾರತ

ಆಗಿನ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಡಾ. ಗೋಪಾಲಕೃಷ್ಣ ಹೆಗಡೆಯವರ ಸಂಪಾದಕತ್ವದಲ್ಲಿ ಮುದ್ರಿಸಿರುವ "ಶೇಣಿಭಾರತ" ಶೇಣಿಯವರ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಪುಸ್ತಕ. ಮಹಾಭಾರತದ ಹಲವು ಪ್ರಸಂಗಗಳ ವಿವಿಧ ಪಾತ್ರಗಳನ್ನು ಶೇಣಿಯವರು ಹೇಗೆ ಕಡೆದು ನಿಲ್ಲಿಸುತಿದ್ದರು ಎಂಬುದನ್ನು ಅರಿಯಲು ಆಸಕ್ತಿಯಿರುವ ಯಕ್ಷಗಾನ ಅಭಿಮಾನಿಗಳು ಓದಬಹುದಾದ ಪುಸ್ತಕ ಇದು. ಶೇಣಿಯವರು ವಿವಿಧ ಸಂಧರ್ಭಗಳಲ್ಲಿ ವಿವಿಧ ಪಾತ್ರಗಳಿಗೆ ಹೇಳಿದ ಸಂಪೂರ್ಣ ಅರ್ಥವನ್ನು ಅಕ್ಷರರೂಪಕ್ಕೆ ಇಳಿಸಲಾಗಿದೆ. ಶೇಣಿಯವರ ಅರ್ಥವನ್ನು ಕೇಳಿ ಅಭ್ಯಾಸ ಇರುವವರು, ಶೇಣಿಯವರ ಧಾಟಿಯಲ್ಲೇ ಇದನ್ನ ಓದಿಕೊಂಡರೆ ಉತ್ತಮ ರಂಜನೆ ಸಿಗುತ್ತದೆ. ಆದರೆ ಎದುರಾಳಿ ಪಾತ್ರದ ಅರ್ಥ ಇಲ್ಲದಿರುವುದರಿಂದ (ಅದನ್ನ ಕೊಡುವುದು ಅಸಾಧ್ಯ) ಶೇಣಿಯವರ ಅರ್ಥವನ್ನು ಧ್ವನಿಮುದ್ರಿಕೆಯಲ್ಲಿ ಕೇಳಿದ ಅನುಭವವನ್ನು ಈ ಪುಸ್ತಕ ಕೊಡುವುದಿಲ್ಲ. ಮುನ್ನುಡಿಯಲ್ಲಿ ಗೋಪಾಲಕೃಷ್ಣ ಹೆಗಡೆಯವರು ಶೇಣಿಯವರ ಜೊತೆಗಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಲ್ಲದೆ, ಅವರ ಅರ್ಥದ ಕೆಲವು ವೈಶಿಷ್ಟ್ಯಗಳನ್ನು ಆಸಕ್ತಿಕರವಾಗಿ ವಿವರಿಸಿದ್ದಾರೆ.

ಕುರುಕ್ಷೇತ್ರಕ್ಕೊಂದು ಆಯೋಗ

ದೇರಾಜೆ ಸೀತಾರಾಮಯ್ಯ ಸಾಂಸ್ಕೃತಿಕ ಪ್ರತಿಷ್ಟಾನದಿಂದ ಪ್ರಕಟವಾಗಿರುವ ಖ್ಯಾತ ತಾಳಮದ್ದಲೆ ಅರ್ಥಧಾರಿ ಮತ್ತು ಸಾಹಿತಿ ದೇರಾಜೆ ಸೀತಾರಾಮಯ್ಯನವರ "ಕುರುಕ್ಷೇತ್ರಕ್ಕೊಂದು ಆಯೋಗ" ಯಕ್ಷಗಾನ ರಂಗದಲ್ಲೊಂದೆ ಅಲ್ಲ ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟವಾದ ಕೃತಿ. ಮಹಾಭಾರತದ ಕೇಂದ್ರಬಿಂದುವಾದ ಕುರುಕ್ಷೇತ್ರ ಯುದ್ದದಲ್ಲಿ ಯುದ್ದಾಪರಾಧಿಗಳು ಯಾರು ಎಂಬುದನ್ನು ಕಂಡು ಹಿಡಿಯಲು ಧರ್ಮದೇವತೆಯ ಅಧ್ಯಕ್ಷತೆಯಲ್ಲಿ ನಿರ್ಮಾಣವಾದ ಒಂದು ವಿಚಾರಣಾ ಆಯೋಗ, ಆ ಆಯೋಗದಲ್ಲಿ ಯುದ್ದದ ಪ್ರತ್ಯಕ್ಷದರ್ಶಿಯಾದ ಸಂಜಯನು ಪಾಂಡವರಿಂದ ಕೌರವರ ತನಕ, ಶಕುನಿಯಿಂದ ಕರ್ಣನ ತನಕ ಹಲವರ ಮೇಲೆ ಹೊರಿಸುವ ಯುದ್ದಾಪರಾಧಗಳು, ಆ ಆಯೋಗದ ಮುಂದೆ ಪಾತ್ರಗಳು ಹಾಜರಾಗಿ ತಮ್ಮ ವರ್ತನೆಗೆ ಕೊಡುವ ಸಮರ್ಥನೆಗಳು.........ಈ ಕಲ್ಪನೆಯೇ ಒಂದು ಅದ್ಭುತ. ಮಹಾಭಾರತದ ಹಲವು ಪಾತ್ರಗಳ ಕುರಿತು ನಮ್ಮಲ್ಲಿ ಇರಬಹುದಾದ ಜಿಜ್ಞಾಸೆಗಳಿಗೆ ಸೂಕ್ತವಾದ ಉತ್ತರ (ಉದಾಹರಣೆಗೆ, ದ್ರೋಣಾಚಾರ್ಯ ಏಕಲವ್ಯನ ಹೆಬ್ಬೆರಳನ್ನು ಕೇಳಿದ್ದು ಸರಿಯೇ?) ಈ ಪುಟ್ಟ ಪುಸ್ತಕದಲ್ಲಿ ದೊರಕುತ್ತದೆ. ತಮ್ಮ ಅರ್ಥಕ್ಕೆ ಹಲವು ಸಂದರ್ಭಗಲ್ಲಿ ಈ ಗ್ರಂಥವೇ ಆಕರ ಎಂದು ಶೇಣಿಯವರೇ ಹೇಳಿದ್ದರಂತೆ. ಅರ್ಥದಾರಿಗಳಾಗುವ ಆಸೆ ಇದ್ದವರು ಓದಲೇ ಬೇಕಾದ ಪುಸ್ತಕ ಇದು.

ತಾಳಮದ್ದಲೆಯ ಅರ್ಥಗಾರಿಕೆಯಲ್ಲಿ ವಾದ-ಪ್ರತಿವಾದಗಳು

ಪೆರ್ಲದ ಗುರುಕುಲ graphics ಮುದ್ರಿಸಿರುವ, ಖ್ಯಾತ ಅರ್ಥದಾರಿ ಪೆರ್ಲ ಕೃಷ್ಣ ಭಟ್ಟರ "ತಾಳಮದ್ದಲೆಯ ಅರ್ಥಗಾರಿಕೆಯಲ್ಲಿ ವಾದ-ಪ್ರತಿವಾದಗಳು" ಯಕ್ಷಗಾನ ಅರ್ಥಗಾರಿಕೆಯಲ್ಲಿ ಆಸಕ್ತಿ ಇರುವವರಿಗೆ ಹೇಳಿ ಮಾಡಿಸಿದ ಪುಸ್ತಕ. ತಾಳಮದ್ದೆಲೆಯಲ್ಲಿ ಹಲವು ಪಾತ್ರಗಳು ತಮ್ಮ ವಿಸ್ತಾರವಾದ ಅರ್ಥದಲ್ಲಿ ಹೇಳಲೇ ಬೇಕಾದ ಅಂಶಗಳು ಯಾವುವು, ಮಂಡಿಸಬೇಕಾದ ವಾದಗಳ ಹಂದರ ಏನು ಮತ್ತು ಆ ಮಂಡಿತ ವಾದಗಳನ್ನು ಎದುರು ಪಾತ್ರಧಾರಿ ಯಾವ ರೀತಿ ಖಂಡಿಸಬೇಕು ಎನ್ನುವುದನ್ನು ಹೆಚ್ಚಿನ ಅನಗತ್ಯ ವಿವರಗಳಿಗೆ ಹೋಗದೆ, point-by-point ಸಂಕ್ಷಿಪ್ತವಾಗಿ ಕೃಷ್ಣ ಭಟ್ಟರು ಹೇಳಿದ್ದಾರೆ. ಈ ಹಂದರದ ಮೇಲೆ ಪಾತ್ರವನ್ನು ಮತ್ತು ಅರ್ಥವನ್ನು ಕಟ್ಟುವುದು ಆಯಾ ಪಾತ್ರಧಾರಿಯ ಸಾಮರ್ಥ್ಯಕ್ಕೆ ಬಿಟ್ಟಿದ್ದು.

ಬಯಲಾಟ - ಡಾ ಶಿವರಾಮ ಕಾರಂತ